ಬಾವಲಿ ಮೀನು
ಪರ್ಸಿಫಾರ್ಮಿಸ್ ಗಣದ ಎಫಿಪ್ಪಿಡೆ ಕುಟುಂಬಕ್ಕೆ ಸೇರಿದ ಕಡಲ ಮೀನು. ಆರ್ಬಿಕ್ಯುಲಾರ್ ಬ್ಯಾಟ್ ಫಿಶ್ ಸಾಮಾನ್ಯ ಹೆಸರು ಶಾಸ್ತ್ರೀಯ ಹೆಸರು ಪ್ಲಟಾಕ್ಸ್ ಆರ್ಬಿಕ್ಯುಲಾರಿಸ್. ಇದು ಕರಾವಳಿ ಪ್ರದೇಶದ ಹವಳ ದಿಬ್ಬಗಳಲ್ಲಿ ವಾಸಿಸುತ್ತದೆ. ಕೆಂಪುಸಮುದ್ರ, ಪೂರ್ವ ಆಫ್ರಿಕಾ ದಿಂದ ಟುವಾಮೊಟೊ ದ್ವೀಪಗಳವರೆಗೆ, ಜಪಾನ್, ಉತ್ತರ ಆಸ್ಟ್ರೇಲಿಯಾ, ಮತ್ತು ನ್ಯೂ ಕ್ಯಾಲಡೊನಿಯಾ ಕರಾವಳಿಗಳಲ್ಲಿಗಳಲ್ಲಿ ಹೆಚ್ಚಾಗಿ ಕಾಣಬರುತ್ತವೆ.

ಇದು ಸುಮಾರು 50 ಸೆಂ.ಮೀ. ವರೆಗೆ ಬೆಳೆಯತ್ತದೆ. ದೇಹ ಚಪ್ಪಟೆಯಾಗಿದ್ದು ದುಂಡಾಗಿರುತ್ತದೆ. ಮೂತಿ ಚಿಕ್ಕದು. ದೇಹದ ಬಣ್ಣ ಬೂದು ಅಥವಾ ಕಂದು. ಮೈಮೇಲೆ 3 ಅಡ್ಡ ಪಟ್ಟೆಗಳುಂಟು. ಇದರಲ್ಲಿ ಒಂದು ಪಟ್ಟಿ ಕಣ್ಣಿನ ಮೇಲೆ ಇರುತ್ತದೆ. ಮತ್ತೊಂದು ತಲೆಯ ಹಿಂಬದಿಯೇ ಇರುತ್ತದೆ. ಇದರ  ಬಾಲದ ರೆಕ್ಕೆ ಅಂಚನ್ನು ಹೊರತು ಪಡಿಸಿ ಉಳಿದಂತೆ ಪಾರದರ್ಶಕ ವಾಗಿರುತ್ತದೆ. ಸಣ್ಣ ಮರಿಗಳು ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಚದುರಿದಂತೆ ಸಣ್ಣ ಕಪ್ಪು ಚುಕ್ಕೆಗಳು ದೇಹದ ಮೇಲೆ ಕಾಣಿಸುತ್ತವೆ. ನೋಡಲು ಆಕರ್ಷಕವಾಗಿರುವುದರಿಂದ ಅಕ್ವೇರಿಯಂಗಳಲ್ಲಿ ಸಾಕಲಾಗುತ್ತದೆ. ಸಣ್ಣ ಮೀನುಗಳು, ಪಾಚಿ, ಕೆಲವು ಸಣ್ಣ ಅಕಶೇರುಕಗಳು ಇದರ ಆಹಾರ.
					(ಕೆ.ವಿ.ಆರ್.ಜಿ.; ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ